ಗುಬ್ಬಚ್ಚಿ

ಪ್ಯಾಸೆರಿಫಾರ್ಮೀಸ್ ಗಣದ ಪ್ಲೋಸೈಯಿಡೀ ಕುಟುಂಬಕ್ಕೆ ಸೇರಿದ ಚಿಕ್ಕಗಾತ್ರದ ಒಂದು ಹಕ್ಕಿ (ಹೌಸ್ ಸ್ಪ್ಯಾರೊ). ಗುಬ್ಬಿ, ಗುಂಚಕ್ಕಿ, ಇದರ ಪರ್ಯಾಯ ನಾಮಗಳು. ವೈಜ್ಞಾನಿಕ ನಾಮ ಪ್ಯಾಸರ್ ಡೊಮಿಸ್ಟಿಕಸ್. ಎಲ್ಲರಿಗೂ ಹೆಚ್ಚು ಪರಿಚಿತವಿರುವ ಹಕ್ಕಿಯಿದು. ಯೂರೋಪ್, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾಗಳ ಮೂಲವಾಸಿಯಾದ ಇದು ಪ್ರಪಂಚದಾದ್ಯಂತ, ದಕ್ಷಿಣ ಮೇರು ಪ್ರದೇಶಗಳನ್ನು ಬಿಟ್ಟು, ವ್ಯಾಪಿಸಿದೆ. ಸುಮಾರು 1850ರ ವೇಳೆಗೆ ಉತ್ತರ ಅಮೆರಿಕಾವನ್ನು ಪ್ರವೇಶಿಸಿದ ಇದು ಇಂದು ಇಡೀ ಖಂಡವನ್ನೇ ಆವರಿಸಿತು.

ಸುಮಾರು 6" ಉದ್ದದ ಪುಟ್ಟ ಹಕ್ಕಿ ಇದು. ಮೋಟಾದ, ಗಟ್ಟಿಯಾದ ಕಾಲುಗಳೂ, ದೃಢವಾದ ಮತ್ತು ಶಂಕುವಿನಾಕಾರದ ಕೊಕ್ಕು, ಗಿಡಗಳ ರೆಂಬೆಗಳನ್ನು ಬಿಗಿಯಾಗಿ ಹಿಡಿಯಲು ಅನುಕೂಲವಾಗುವಂತೆ ಮಾರ್ಪಾಡಾಗಿರುವ ಕಾಲ್ಬೆರಳುಗಳು, ವಿಶೇಷರೀತಿಯ ಅಂಗುಳಾಸ್ಥಿ, ಭಿನ್ನರೀತಿಯ ಶುಕ್ರಾಣುಗಳು, ಕೇವಲ 14 ಎಲುಬುಗಳಿಂದ ಕೂಡಿದ ಕುತ್ತಿಗೆ-ಇವು ಗುಬ್ಬಚ್ಚಿಯ ವೈಶಿಷ್ಟ್ಯ. ಗಂಡು ಮತ್ತು ಹೆಣ್ಣು ಹಕ್ಕಿಗಳ ದೇಹವರ್ಣದಲ್ಲಿ ಸ್ವಲ್ಪ ಭಿನ್ನತೆ ಉಂಟು. ಗಂಡು ಹಕ್ಕಿಯ ದೇಹದ ಮೇಲ್ಭಾಗ ಕಂದು, ಹೊಟ್ಟೆಯ ಭಾಗ ನಸುಹಳದಿ ಬಣ್ಣದ್ದು. ಇದರ ನೆತ್ತಿ ಬೂದು ಬಣ್ಣದ್ದಾಗಿಯೂ ಕೆನ್ನೆಗಳು ಬಿಳಿಯಾಗಿಯೂ ಇವೆ. ಗಂಟಲಿನ ಬಳಿ ಕಪ್ಪು ಬಣ್ಣದ ಮಚ್ಚೆ ಇದೆ. ಹೆಣ್ಣು ಹಕ್ಕಿಗಳಲ್ಲಿ ಬೆನ್ನು ಭಾಗ ಕಂದುಬಣ್ಣಕ್ಕೂ ಉದರಭಾಗ ನಸುಹಳದಿ ಬಣ್ಣಕ್ಕೂ ಇವೆ. ಗಂಟಲಿನ ಬಳಿ ಕಪ್ಪುಮಚ್ಚೆ ಇಲ್ಲ.

ಮಾನವನೆಲೆ ಇರುವೆಡೆಯಲ್ಲೆಲ್ಲ ಗುಬ್ಬಚ್ಚಿಗಳ ವಾಸ್ತವ್ಯ ಇದರ ಹರವು ಇತ್ತು. ಇಂದು ವಿರಳವಾಗುತ್ತದೆ. ಪಟ್ಟಣಗಳ ಗದ್ದಲಕ್ಕೂ ಹಳ್ಳಿಗಳ ಶಾಂತ ವಾತಾವರಣಕ್ಕೂ ಹೊಂದಿಕೊಂಡು ಜೀವಿಸುವ ಸಾಮಥ್ರ್ಯ ಗುಬ್ಬಚ್ಚಿಗಳಿಗಿವೆ. ಮಾನವ ತನ್ನ ವಾಸಕ್ಕೆ ಹೊಸ ಹೊಸ ಸ್ಥಳಗಳನ್ನು ಹುಡುಕಿ ನೆಲೆಸುತ್ತ ಬಂದಾಗಲೆಲ್ಲ ಅಂಥ ಜಾಗಗಳಿಗೆ ಮೊಟ್ಟ ಮೊದಲು ಬರುವ ಹಕ್ಕಿಯೆಂದರೆ ಗುಬ್ಬಚ್ಚಿ. ಗುಬ್ಬಚ್ಚಿಗಳು ಸರ್ವಭಕ್ಷಿಗಳು. ಕಾಳುಕಡ್ಡಿ, ಕೀಟಗಳು, ಫಲಗಳು, ಬೀಜಗಳು- ಹೀಗೆ ಇವುಗಳ ಆಹಾರ ವೈವಿಧ್ಯಪೂರ್ಣ. ಹಗಲೆಲ್ಲ ದೊಡ್ಡ ದೊಡ್ಡ ಗುಂಪುಗಳಲ್ಲಿ ಕೂಡಿದ್ದು, ಕುಪ್ಪಳಿಸುತ್ತ, ಹಾರುತ್ತ ಕಾಳುಕಡ್ಡಿಗಳನ್ನು ತಿನ್ನುತ್ತ ಕಾಲಕಳೆಯುತ್ತವೆ. ಕೆಲವೊಮ್ಮೆ ಹೊಲಗದ್ದೆಗಳ ಬಳಿ ಬಲುದೊಡ್ಡ ಗುಂಪುಗಳಲ್ಲಿ ಸೇರಿಕೊಂಡು ಬೆಳೆಯನ್ನು ಹಾಳುಮಾಡುವುದುಂಟು. ಇದರಿಂದಾಗಿ ಕೆಲವೆಡೆ ಪಿಡುಗು ಎನಿಸಿವೆ. ಆದರೂ ಕೀಟಗಳನ್ನು ತಿಂದು ನಾಶಪಡಿಸುವುದರಿಂದ ಉಪಕಾರಿಗಳೂ ಹೌದು. ಗುಬ್ಬಚ್ಚಿಗಳು ನಡೆಯುವ ಬದಲು ಕುಪ್ಪಳಿಸುತ್ತವೆ ಎಂಬುದು ಗಮನಾರ್ಹ.

ಗುಬ್ಬಚ್ಚಿಯ ಪ್ರಣಯಕ್ರೀಡೆ ವೈಶಿಷ್ಟ್ಯಪೂರ್ಣ. ಗಂಡು ತನ್ನ ಗರಿಕೆದರಿದ ರೆಕ್ಕೆಯನ್ನು ಬಗ್ಗಿಸಿ, ಕಮಾನಿನಂತೆ ಬಾಗಿದ ಪುಕ್ಕವನ್ನು ತಿರುವುತ್ತ, ನಡಿಗೆಯಲ್ಲಿ ಬಿಂಕವನ್ನು ಪ್ರದರ್ಶಿಸುತ್ತ ವಿಚಿತ್ರವಾದ ಕೀಚಲು ಧ್ವನಿಯಿಂದ ಪ್ರಣಯ ಕ್ರೀಡೆಯಲ್ಲಿ ತೊಡಗುತ್ತದೆ. ಗೂಡುಗಳನ್ನು ಗಂಡು ಮತ್ತು ಹೆಣ್ಣುಗಳೆರಡೂ ಕೂಡಿ ನಿರ್ಮಿಸುತ್ತವೆ. ಮರಗಳ ಪೊಟರೆ, ಮನೆಗಳ ಸೂರು, ಕಟ್ಟಡಗಳ ಮೂಲೆ ಮುಂತಾದ ಸ್ಥಳಗಳು ಗೂಡುಕಟ್ಟಲು ಅಚ್ಚುಮೆಚ್ಚಿನ ಸ್ಥಳಗಳು. ಬಿಡಿಬಿಡಿಯಾದ ಗರಿಗಳು, ಒಣಹುಲ್ಲು, ಕಸಕಡ್ಡಿಗಳನ್ನು ಉಪಯೋಗಿಸಿ ಒರಟು ಗೂಡುಗಳನ್ನು ಕಟ್ಟುತ್ತದೆ. ಸ್ಥಳಕ್ಕನುಗುಣವಾಗಿ ವರ್ಷದಲ್ಲಿ ಎರಡಕ್ಕೂ ಹೆಚ್ಚು ಬಾರಿ ಹೆಣ್ಣು ಗುಬ್ಬಚ್ಚಿ ಒಂದು ಸಲಕ್ಕೆ 3-5 ಮೊಟ್ಟೆ ಇಡುತ್ತದೆ. ಮೊಟ್ಟೆಗಳ ಬಣ್ಣ ಬಿಳಿ. ಮೇಲೆಲ್ಲ ಬೂದಿ ಬಣ್ಣದ ಮಚ್ಚೆಗಳಿವೆ. ಹೆಣ್ಣು ಗುಬ್ಬಚ್ಚಿ 13-14 ದಿನಗಳು ಕಾವು ಕೊಟ್ಟ ಬಳಿಕ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ. 

ಗಂಡು ಗುಬ್ಬಚ್ಚಿಯನ್ನೇ ಹೋಲುವ ಪ್ಯಾಸ್ಸೆರ್ ಮೋಂಟ್ಯಾನಸ್ ಎಂಬ ಮರಗುಬ್ಬಚ್ಚಿ (ಟ್ರೀ ಸ್ಪ್ಯಾರೊ) ಚೀನ, ಕೊರಿಯ, ಜಪಾನ್ ಮತ್ತು ಯೂರೋಪಿನ ಕೇಂದ್ರ ಭಾಗದಲ್ಲಿ ಹೇರಳವಾಗಿ ವಾಸಿಸುತ್ತವೆ. ಇವು ಸಹ ನಗರವಾಸಿಗಳು. ಆದರೆ ಶರತ್ಕಾಲದಲ್ಲಿ ಪಕ್ವವಾದ ಭತ್ತದ ಬೆಳಸಿಗೆ ಇವುಗಳ ಹಿಂಡು ಊಹಿಸಲಾಗದಷ್ಟು ಹಾನಿ ಎಸಗುತ್ತದೆ. ಆದ್ದರಿಂದ ಜಪಾನೀಯರು ನಾನಾ ಬಗೆಯ ಬೆದರುಗೊಂಬೆಗಳಿಂದ ಹಾಗೂ ಕರ್ಕಶ ಗದ್ದಲದಿಂದ ಇವುಗಳ ಹಾವಳಿಗಳನ್ನು ತಡೆಗಟ್ಟುವರಲ್ಲದೆ ವರ್ಷಂಪ್ರತಿ 5-10 ದಶಲಕ್ಷ ಪಕ್ಷಿಗಳನ್ನು ಹಿಡಿದು ಮಾರುತ್ತಾರೆ.	

ಇಂದು ಮೂರು ಮುಖ್ಯ ಕಾರಣಗಳಿಂದಾಗಿ ಗುಬ್ಬಚ್ಚಿಗಳ ಪ್ರಮಾಣ ಕಳವಳಕಾರಿಯಾಗಿ ಜಾಗತಿಕ ಮಟ್ಟದಲ್ಲಿ ಕಡಿಮೆಯಾಗುತ್ತಿದೆ. ಮೊದಲನೆಯದಾಗಿ, ಇತ್ತೀಚೆಗೆ ತೀವ್ರವಾಗಿ ಬಳಕೆಗೆ ಬಂದ ಸೀಸರಹಿತ ಪೆಟ್ರೋಲಿನಿಂದ ಹೊಮ್ಮುವ ರಾಸಾಯನಿಕಗಳು ಗುಬ್ಬಚ್ಚಿಗಳು ತಮ್ಮ ಮರಿಗಳಿಗೆ ಮೊದಲ ಕೆಲವು ದಿನಗಳು ತಿನ್ನಿಸುವ ಕ್ರಿಮಿಗಳಿಗೆ ಮಾರಕವಾಗಿರುವುದು. ಎರಡನೆಯದಾಗಿ, ಮಾನ ಇಂದಿನ ದಿನಗಳಲ್ಲಿ ನಿರ್ಮಿಸುತ್ತಿರುವ ಕಟ್ಟೊಣಗಳಲ್ಲಿ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ತಾವೇ ಇಲ್ಲದಂತಾಗಿರುವುದು ಮತ್ತು ಮೂರನೆಯದಾಗಿ ಹಿಂದಿನಂತೆ ಕಾಳುಕಡ್ಡಿಗಳು ಹೆಚ್ಚಾಗಿ ಮನೆ ಹೊರಗೆ ಹಾಗೂ ರಸ್ತೆಗಳಲ್ಲಿ ಸಿಗದಿರುವುದು.
ಇವುಗಳ ಸಂತತಿ ಹೆಚ್ಚಿಸಲು ಜಾಗತಿಕ ಮಟ್ಟದಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಗುಬ್ಬಚ್ಚಿಗಳಿಗೆ ಗೂಡು ನಿರ್ಮಿಸಲು ಅನುವಾಗು ಮನೆ ಛಾವಣಿಗಳು, ಹಟ್ಟಿಗಳೂ ಬಂದಿವೆಯಾದರೂ ಆಶಾದಾಯದ ಫಲಿತಾಂಶವೇನೂ ಸಂದಿಲ್ಲ.

ಹಳದಿ ಗಂಟಲಿನ ಗುಬ್ಬಚ್ಚಿ ಭಾರತದ ಕಾಡುಗಳಲ್ಲಿ ಕಂಡುಬರುವ ಮತ್ತೊಂದು ಪ್ರಭೇದದ ಗುಬ್ಬಚ್ಚಿ. ಇದರ ವೈಜ್ಞಾನಿಕ ನಮದ್ವಯ ಪೆಟ್ರೊನಿಯಾ ಜಾóಂಥೊಕೋಲಿಸ್. ಈ ಹಕ್ಕಿಯನ್ನು ಕೊಂದ ಸಲೀಂ ಆಲಿ, ಇದರ ಗುರುತು ಪತ್ತೆಗಾಗಿ ಪ್ರಖ್ಯಾತ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಗೆ ಮೊದಲಬಾರಿಗೆ ಹೋದದ್ದು. ಮುಂದೆ ಇದೇ ಅವರನ್ನು ಭಾರತದ ಹಕ್ಕಿ ಮನುಷ್ಯನನ್ನಾಗಿಸಿದ್ದು.
ಹಳದಿ ಗಂಟಲಿನ ಗುಬ್ಬಚ್ಚಿ, ಮನೆ ಗುಬ್ಬಚ್ಚಿಯಿಲ್ಲದೆ ಇತರೆ ಏಳು ಬಗೆ ಗುಬ್ಬಚ್ಚಿಗಳು ಭಾರತದಲ್ಲಿ ಕಂಡುಬರುತ್ತವೆ. ಅವು : ಸ್ಪಾನಿಶ್ ಗುಬ್ಬಚ್ಚಿ (ಪೆಸ್ಸರ್ ಹಿಸ್ಟಾನಿಯೋಲೆನ್ಸಿಸ್), ಸಿಂಧ್ ಗುಬ್ಬಚ್ಚಿ(ಪೆಸ್ಸರ್ ಪೈರೊಹೊನೊಟಸ್), ಪಿನ್ನಯೊನ್ ಮರ ಗುಬ್ಬಚ್ಚಿ (ಪೆಸ್ಸರ್ ರುಟಿಲಾನ್ಸ್ ಟಿಮಿಂಕ್), ಮೃತ ಸಮುದ್ರ ಗುಬ್ಬಚ್ಚಿ(ಪೆಸ್ಸರ್ ಯೊಬಿಯಾಟಿಕಸ್), ಯುರೇಷಿಯಾ ಮರ ಗುಬ್ಬಚ್ಚಿ (ಪೆಸ್ಸರ್ ಮೊನಟಾನಸ್), ಯುರೇಷಿಯಾದ ಕಲ್ಲು ಗುಬ್ಬಿ(ಪೆಟ್ರೊನಿಯಾ ಪದೆಟ್ರೊನಿಯಾ), ಮಬ್ಬುಕಲ್ಲು ಗುಬ್ಬಿ (ಪೆಟ್ರೊನಿಯಾ ಬ್ರಾಚಿಡಕ್ಟೈಲ). 
		(ಎಸ್.ಎಚ್.ಒ)
									(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ